Tourism

 

                                                          ಹುಮನಾಬಾದ ಪಟ್ಟಣ ಹಾಗೂ ಸುತ್ತಮುತ್ತಲಿನ ಪ್ರವಾಸಿ ತಾಣಗಳು

 

ಶ್ರೀ ವೀರಭದ್ರೇಶ್ವರ ದೇವಾಲಯ: ರಾಜಾರಾಮಚಂದ್ರ ಜಾಧವನು ಈ ಪ್ರಸಿದ್ಧವಾದ ಶ್ರೀ ವೀರಭದ್ರೇಶ್ವರ ದೇವಾಲಯವನ್ನು ನಿರ್ಮಿಸಿದನು. ಚಾಳುಕ್ಯರ ಕಾಲದಲ್ಲಿ ಹುಮನಾಬಾದ ಜಯಸಿಂಹನಗರವೆಂದು ಪ್ರಸಿದ್ಧಿ ಪಡೆದಿತ್ತು. ಭವ್ಯವಾದ ಗರ್ಭಗುಡಿಯಲ್ಲಿ ಶ್ರೀ ವೀರಭದ್ರೇಶ್ವರ ಮೂರ್ತಿಯು ಕಂಗೊಳಿಸುತ್ತಿದೆ. ಈ ಗುಡಿಗೆ ಸುಮಾರು ೫೦ ಅಡಿ ಎತ್ತರದ ಶಿಖರವಿದ್ದು ಒಳಾಂಗಣದಲ್ಲಿ ಎರಡು ಎತ್ತರದ ದೀಪ ಸ್ತಂಭಗಳಿವೆ. ಬಲಭಾಗದ ದೀಪಸ್ತಂಭವು ಅಲುಗಾಡಿಸಿದಾಗ ಅಲುಗಾಡುತ್ತದೆ. ಈ ದೇವಾಲಯವನ್ನು ಪೂರ್ವಾಭಿಮುಖವಾಗಿ ನಿರ್ಮಾಣ ಮಾಡಲಾಗಿದೆ. ದೇವಾಲಯದ ರಚನಾ ವಿನ್ಯಾಸ ಹಾಗೂ ಶಿಲ್ಪಗಳು ಆಕರ್ಷಿಸುತ್ತವೆ. ಪ್ರತಿವರ್ಷ ಜನೇವರಿ ೧೪ರಿಂದ ಜನೇವರಿ ೨೬ರ ವರೆಗೆ ಜಾತ್ರೆ ನಡೆಯುತ್ತದೆ. ಜನೆವರಿ ೨೬ರ ಮುಂಜಾವಿನಲ್ಲಿ ಶ್ರೀ ವೀರಭದ್ರೇಶ್ವರನ ರಥೋತ್ಸವ ಮತ್ತು ಪಲ್ಲಕ್ಕಿ ಮೆರವಣಿಗೆ ನಡೆಯುತ್ತದೆ ಆಂಧ್ರ ಮಹಾರಾಷ್ಟ್ರ ಹಾಗೂ ಕರ್ನಾಟಕದಿಂದ ಸಹಸ್ರಾರು ಭಕ್ತರು ಬಂದು ದರ್ಶನ ಪಡೆದು, ಅಗ್ನಿ ತುಳಿಯುತ್ತಾರೆ.

ಕಾರಂಜಾ ಜಲಾಶಯ: ರಾಜ್ಯ ಹೆದ್ದಾರಿ ೧೦೯ ಬೀದರ ಶ್ರೀರಂಗಪಟ್ಟಣ ಮಾರ್ಗದಲ್ಲಿದೆ. ಬ್ಯಾಲಹಳ್ಳಿ (ಕೆ), ಹಾಲಹಳ್ಳಿ (ಕೆ), ಕಮಾಲಪುರ, ಅತಿವಾಳ ಮೊದಲಾದ ಗ್ರಾಮಗಳ ಭೂಪ್ರದೇಶದಲ್ಲಿ ಈ ಜಲಾಶಯವನ್ನು ನಿರ್ಮಿಸಲಾಗಿದೆ. ಕಾರಂಜಾ ನದಿಯು ಮಾಂಜರಾ ನದಿಯ ಉಪನದಿಯಾಗಿದೆ. ಈ ನದಿಯು ಆಂದ್ರಪ್ರದೇಶದ ಸಂಗಾರೆಡ್ಡಿ ಜಿಲ್ಲೆಯ ಜಹಿರಾಬಾದ ತಾಲೂಕಿನ ಕೋಹಿರ್ ಎಂಬ ಗ್ರಾಮದ ಬಳಿ ಉಗಮವಾಗಿ ಭಂಗೂರು ಗ್ರಾಮದ ಹತ್ತಿರ ಪ್ರವೇಶಿಸಿ ಮಾಂಜರಾ ನದಿ ಸೇರುತ್ತದೆ. ಈ ಜಲಾಶಯದಿಂದ ಹುಮನಾಬಾದ ಪಟ್ಟಣಕ್ಕೆ ಹಾಗೂ ತಾಲೂಕಿನ ಬಹುತೇಕ ಗ್ರಾಮಗಳು ನೀರಾವರಿ ಸೌಲಭ್ಯ ಪಡೆದಿವೆ. 

ಹಣಕುಣಿ ಕೋಟೆ: ರಾಜಾ ರಾಮಚಂದ್ರ ಜಾಧವನ ಆಳ್ವಿಕೆಯಲ್ಲಿ ಹುಮನಾಬಾದ ಪಟ್ಟಣದ ದಕ್ಷಿಣ ದಿಕ್ಕಿನ ೫ ಕಿ.ಮೀ. ಅಂತರ ದಲ್ಲಿರುವ ಹಣಕುಣಿ ಎಂಬ ಗ್ರಾಮದಲ್ಲಿ ಒಂದು ಕೋಟೆ ನಿರ್ಮಿಸಿದನು. ಆ ಕೋಟೆಯು ರಾಜನ ಹಣ-ಬೊಕ್ಕಸದ ಕೇಂದ್ರವಾಗಿತ್ತು. ರಾಜಧಾನಿಯ ಮೇಲೆ ವೈರಿಗಳು ದಾಳಿ ಮಾಡಿದರೂ ಅವರ ಕೈಗೆ ಸಂಪತ್ತು ದೊರೆಯದಂತೆ ಈ ರೀತಿ ಪಕ್ಕದ ಹಳ್ಳಿಯಲ್ಲಿ ಕೋಟೆ ಕಟ್ಟಿಸುತ್ತಿದ್ದರು. ಅಂತಹ ಕೋಟೆಯೇ ಹಣಕುಣಿ ಕೋಟೆ ಯಾಗಿದೆ.

ಬುದ್ಧವಿಹಾರ ರೇಕುಳಗಿ: ಸುಮಾರು ಹತ್ತು ವರ್ಷಗಳ ಹಿಂದೆ ಈ ಬೆಟ್ಟದ ಮೇಲೆ ಪಗೋಡಾ ಮಾದರಿಯ ಬುದ್ದವಿಹಾರವನ್ನು ನಿರ್ಮಿಸಲಾಯಿತು. ಈ ಬುದ್ಧ ದೇವಾಲಯಕ್ಕೆ ಥೈಲೆಂಡ್ ದೇಶದಿಂದ ಐದು ಅಡಿ ಎತ್ತರ ವಿರುವ ಮಿಶ್ರಾಧಾತುವಿನ ಕಂಚಿನ ಬುದ್ಧಮೂರ್ತಿಯನ್ನು ತಂದು ಸ್ಥಾಪಿಸಲಾಯಿತು. ಕರ್ನಾಟಕ ಸರ್ಕಾರವು ಈ ಬೆಟ್ಟದ ಮೇಲೆ ಹತ್ತಲು ಉತ್ತಮವಾದ ರಸ್ತೆಯನ್ನು ಪ್ರವಾಸಿಗರಿಗೆ ವಸತಿ ಗೃಹಗಳನ್ನು ಹಾಗೂ ನೀರಿನ ವ್ಯವಸ್ಥೆಯನ್ನು ಮಾಡಿಕೊಟ್ಟಿದೆ. ಪ್ರತಿ ‌ವರ್ಷ ದಶರಾ ಮಹಾನವಮಿಯಂದು ನಾಡಿನ ನಾನಾ ಭಾಗಗಳಿಂದ ಅನೇಕ ಭಕ್ತರು ಬುದ್ದಪೂರ್ಣಿಮೆ ಹಾಗೂ ಧಮ್ಮ ಪರಿವರ್ತನಾ ದಿನ ನಿಮಿತ್ತ ಜರುಗುವ ಇಲ್ಲಿಯ ಜಾತ್ರಾ ಮಹೋತ್ಸವಕ್ಕೆ ಬಂದು ಹಾಜರಾಗುತ್ತಾರೆ. ಬುದ್ದನಿಗೆ ಬುದ್ದಂ ಶರಣಂ ಗಚ್ಚಾಮಿ ಧಮಂ ಶರಣಂ ಗಚ್ಚಾಂ ಸಂಘಂ ಶರಣಂ ಗಚ್ಚಾಮಿ ಎಂದು ನಮಸ್ಕರಿಸಿ ಪುನೀತರಾಗುತ್ತಾರೆ.

 

ಜಲಸಂಗಿ: ಇದನ್ನು ಪ್ರಸ್ತುತ ಜಲಸಂಗಿ ಎಂದು ಕರೆಯುತ್ತಾರೆ. ಕಲ್ಯಾಣದ ಚಾಲುಕ್ಯ ಅರಸ ೬ನೇ ವಿಕ್ರಮಾದಿತ್ಯನು ಪ್ರಸಿದ್ಧ ಕಲ್ಮೇಶ್ವರ ದೇವಾಲಯವನ್ನು ಸಿರ್ಮಿಸಿದನು. ನಕ್ಷತ್ರ ಆಕಾರವಿರುವ ದೇವಾಲಯದ ಹೊರಭಾಗದಲ್ಲಿ ಸುಮಾರು ೩೦ ಆಕರ್ಷಕ ಮದನಿಕಾ ಶಿಲ್ಪಗಳಿವೆ. ನಾಟ್ಯ ಗಣಪತಿಯ ನಟನಾ ಭಂಗಿ ಕಲಾ. ಪ್ರಿಯರನ್ನು ಆಕರ್ಷಿಸುತ್ತದೆ. ಸುಂದರ ಭಂಗಿಯಲ್ಲಿರುವ ವೀರಭದ್ರ, ದಕ್ಷಿಣಾಮೂರ್ತಿ, ದುರ್ಗಾ, ವರಾಹ ಅವತಾರ, ದರ್ಪಣ ಸುಂದರಿ, ನರಸಿಂಹ ಅವತಾರದ ಶಿಲ್ಪಗಳು, ಕಾವ್ಯಕನ್ನಿಕೆ, ಶಾಸನ ಬರೆಯುವ ಸುಂದರಿ, ಗಂಧರ್ವ ಕನ್ಯೆ ಮುಂತಾದವು ಗಮನಾರ್ಹವಾಗಿವೆ. ಆರನೇ ವಿಕ್ರಮಾದಿತ್ಯನ ಪರಾಕ್ರಮವನ್ನು ಹೊಗಳಿ ಶಾಸನವನ್ನು ಬರೆಯುವ ಶಾಸನ ಸುಂದರಿಯ ಶಿಲ್ಪವು ಆಕರ್ಷಕವಾಗಿದೆ. ಶಾಸನದ ಅರ್ಥ ಹೀಗಿದೆ- ಚಾಲುಕ್ಯ ವಂಶದ ವಿಕ್ರಮಾದಿತ್ಯನೆಂಬ ರಾಜನು ಏಳು ದ್ವೀಪಗಳಿಂದ ಸಮಾವೇಶಗೊಂಡ ಭೂಮಿಯನ್ನು ತನ್ನದಾಗಿ ಮಾಡಿಕೊಂಡು ರಾಜ್ಯಭಾರ ಮಾಡುತ್ತಿದ್ದಾನೆ.

 

This Page is maintained by Chief Officer TMC Humnabad, Contact No: 9164767215

No. Of Visitors :
Last Updated   : 19/02/2012 Release History
Release 2.0.0, Powered By Karnataka Municipal Data Society & maintained by Humnabad TMC
This website can best viewed with the resolution 1024 * 768 using Internet Explorer 7.0 or above.
Valid CSS!